ಓವ್ರೆಗಾನಿಯ: ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ, ಇದರ ಪರಿಶೋಧನೆ ಈಚಿನದು.  ಮೆಕ್ಸಿಕೋದ ಮೂಲವಾಸಿ. ಮೆಕ್ಸಿಕೋದ ಹೆಸರಾಂತ ಅಧ್ಯಕ್ಷ ಡಾನ್ ಅಲ್ವಾರೊ ಓವ್ರೆಗಾನ್ ಎಂಬಾತನ ಗೌರವಾರ್ಥವಾಗಿ ಇದಕ್ಕೆ ಈ ಹೆಸರು ಕೊಡಲಾಗಿದೆ.  ಫಲವತ್ತಾಗಿರುವ ಸುಣ್ಣಕಲ್ಲುಗಳ ಮಧ್ಯದಲ್ಲಿ ಬೆಳೆದಿದ್ದ ಈ ಸಸ್ಯವನ್ನು ನೋಡಿದವ ಫ್ರಿಕ್ (1925).  ಬಾಹ್ಯರೂಪದಲ್ಲಿ ಇದು ಎನ್ಸೆಫಲೊಕಾರ್ಪಸ್ ಸಸ್ಯವನ್ನು ಹೋಲುತ್ತದೆ.  ಆದರೆ ಇದರ ಗಿಣ್ಣುಗಳು ಎಲೆಗಳಂತೆ ದಪ್ಪ ಮತ್ತು ಉದ್ದ.  ಇವುಗಳಲ್ಲಿ ರಂಧ್ರಗಳಿವೆ (ಏರಿಯೋಲ್).
ಓವೆಗ್ರಾನಿಯ ಡಿನಿಗ್ರಿ ಎಂಬ ಪ್ರಭೇದಕ್ಕೆ ದಪ್ಪವಾದ ತಾಯಿಬೇರು ಇದೆ. ಇದರ ಗಿಣ್ಣುಗಳು ತ್ರಿಕೋನಾಕಾರದ ಬಿಲ್ಲೆಯಂತಿವೆ;  ಬಣ್ಣ ಬೂದಿಮಿಶ್ರಿತ ಹಸಿರು; ಹಿಂಭಾಗದಲ್ಲಿ ಉಬ್ಬುಗಳಿವೆ.  ಅವುಗಳ ತುದಿಯಲ್ಲಿ ದೃಢವಲ್ಲದ, ಹಿಂದಕ್ಕೆ ಬಾಗಿದ ಮುಳ್ಳುಗಳಿವೆ.  ಬಿಳುಪು ಅಥವಾ ನಸುಗುಲಾಬಿ ಬಣ್ಣದ ಹೂಗಳು ಮುಕುಟದ ಮೇಲುಭಾಗದಲ್ಲಿ ಅರಳುತ್ತವೆ (ನೋಡಿ- ಕಳ್ಳಿ).	(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ